ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 7 ಶೂಟರ್‌ಗಳನ್ನ ಪಂಜಾಬ್, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಬಂಧಿಸಲಾಗಿದೆ. ಕಳೆದ 48 ಗಂಟೆಗಳಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 7 ಶೂಟರ್‌ಗಳನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಾಬಾ ಸಿದ್ದಿಕಿ ಹತ್ಯೆ ಹಾಗೂ ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶುಕ್ರವಾರ ದೆಹಲಿ ಪೊಲೀಸ್ ವಿಶೇಷ ಕೋಶದ ನೇತೃತ್ವದಲ್ಲಿ ವಿವಿಧೆಡೆ ನಡೆದ ದಾಳಿಯಲ್ಲಿ 6 ಅರೆ ಸ್ವಯಂಚಾಲಿತ (ಸೆಮಿ ಆಟೋಮೆಟಿಕ್) ಶಸ್ತ್ರಾಸ್ತ್ರಗಳು ಹಾಗೂ ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬಿಷ್ಣೋಯ್ ಗ್ಯಾಂಗ್‌ನ ಬಂಧಿತ 7 ಶೂಟರ್‌ಗಳ ಪೈಕಿ ಮೊದಲ ಬಂಧನವನ್ನು ಕಳೆದ ಬುಧವಾರ ಹರಿಯಾಣದಲ್ಲಿ ಮಾಡಲಾಗಿತ್ತು. 2ನೇ ಶೂಟರ್‌ನನ್ನ ರಾಜಸ್ಥಾನದಲ್ಲಿ ಬಂಧಿಸಲಾಯಿತು. ಉಳಿದ ಐವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.
ಬಿಷ್ಣೋಯ್ ಎನ್‌ಕೌಂಟರ್‌ಗೆ 1,11,11,111 ರೂ. ಬಹುಮಾನ:
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದ್ರೆ 1,11,11,111 ನಗದು ಬಹುಮಾನವನ್ನು ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ (Karni Sena) ಇತ್ತೀಚೆಗಷ್ಟೇ ಘೋಷಣೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ್ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ಈ ಬಹುಮಾನವನ್ನು ಘೋಷಿಸಿದ್ದಾರೆ.
ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ, ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಿಷ್ಣೋಯ್ ಗ್ಯಾಂಗ್‌ಗೂ ಸಂಬಂಧ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.