ನವರಾತ್ರಿ ಮೊದಲ ದಿನ
ಶೈಲಪುತ್ರಿ ಸ್ವರೂಪ ಆರಾಧನೆ
*
ವಂದೇ ವಾಂಛಿತಲಾಭಾಯ
ಚಂದ್ರಾರ್ಧಕೃತ ಶೇಖರಾಂ|
ವೃಷಾರೂಢಾಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಂ||
ಮನುಷ್ಯರ ಎಲ್ಲ ಕಷ್ಟಗಳನ್ನು ನೀಗಿ, ಅಭಯವನ್ನಿತ್ತು ಸಲಹುವ ಜಗನ್ಮಾತೆಯ ಒಂಬತ್ತು ದಿನಗಳ ಸುದೀರ್ಘ ಆರಾಧನೆಯೇ ನವರಾತ್ರಿ ಉತ್ಸವ. ಆಶ್ವಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದ (ಪಾಡ್ಯ) ದಿಂದ ಆರಂಭ ಆಗುವ ಪೂಜೆಯು ನವಮಿ ಪರ್ಯಂತ ಪ್ರತೀ ದಿನ ದೇವಿಯನ್ನು ಒಂದೊಂದು ವಿಶಿಷ್ಟ ಸ್ವರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಲೋಕ ಕಂಟಕರಾದ ರಾಕ್ಷಸರ ಸಂಹಾರ ಮಾಡಿ, ಜಗತ್ತಿನ ಉದ್ಧಾರ ಮಾಡುವ ಜಗಜ್ಜನನಿಯ ನವವಿಧ ಸ್ವರೂಪವನ್ನು ಪೂಜಿಸೋಣ.
ಶೈಲಪುತ್ರಿ
ನವರಾತ್ರಿಯ ಮೊದಲ ದಿನದ ದೇವಿಯ ಆರಾಧನೆಯ ಸ್ವರೂಪ ಶೈಲಪುತ್ರಿ. ಶೈಲ ಎಂದರೆ ಪರ್ವತ ಹಾಗೂ ಪುತ್ರಿ ಅಂದರೆ ಮಗಳು. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥವಾಗುತ್ತದೆ. ಆಕೆ ಹಿಮಾಲಯ ರಾಜನ ಮಗಳು. ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆಕೆಯ ಎಡ ಕೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ.
ಪುರಾಣಗಳ ಪ್ರಕಾರ, ಇನ್ನೂ ಒಂದು ಉಲ್ಲೇಖ ಇದೆ. ಮಹಾವಿಷ್ಣುವಿನ ನಾಭಿ ಕಮಲದಲ್ಲಿ ನೆಲೆಸಿದ ಬ್ರಹ್ಮನಿಗೆ ವಿಷ್ಣುವಿನ ಕಿವಿಗಳ ಕಶ್ಮಲದಿಂದ ಉದ್ಭವಿಸುವ ಮಧು ಹಾಗೂ ಕೈಟಭ ಎಂಬ ರಕ್ಕಸರಿಬ್ಬರಿಂದ ಬಹಳ ತೊಂದರೆ ಉಂಟಾಗುತ್ತದೆ. ಆಗ ಸೃಷ್ಟಿ ಕಾರ್ಯದ ಅಡಚಣೆ ಎದುರಿಸುವ ಬ್ರಹ್ಮದೇವ ರಾಕ್ಷಸದ್ವಯರ ಸಂಹಾರಕ್ಕೆ ಮಹಾವಿಷ್ಣುವನ್ನು ಪ್ರಾರ್ಥಿಸುತ್ತಾನೆ.
ಆದರೆ, ಆ ಸಮಯದಲ್ಲಿ ಮಹಾವಿಷ್ಣುವು ಯೋಗನಿದ್ರಾವಸ್ಥೆಯಲ್ಲಿ ಇರುವುದರಿಂದ ಬ್ರಹ್ಮನ ಮೊರೆ ಆಲಿಸುವುದಿಲ್ಲ. ಆಗ ಅನ್ಯ ಮಾರ್ಗ ಕಾಣದ ಬ್ರಹ್ಮ, ಮಹಾವಿಷ್ಣುವನ್ನು ಆವರಿಸಿರುವ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ ಸ್ತುತಿಸುತ್ತಾನೆ. ಆಗ ಪ್ರಸನ್ನಳಾಗುವ ದೇವಿಯು ಮಹಾವಿಷ್ಣುವು ಯೋಗನಿದ್ರೆಯಿಂದ ಹೊರಬರುವಂತೆ ಮಾಡಿ ತನ್ಮೂಲಕ ಮಧು – ಕೈಟಭರ ಸಂಹಾರ ಆಗುವಂತೆ ಕರುಣಿಸುತ್ತಾಳೆ. ಆದುದರಿಂದ ನಾವು ನವರಾತ್ರಿಯ ಮೊದಲ ದಿನ ಕಲಶದಲ್ಲಿ ಯೋಗನಿದ್ರಾ ಸ್ವರೂಪದ ದೇವಿಯನ್ನು ಧ್ಯಾನಿಸಿ, ಆವಾಹನೆ ಮಾಡಿ ಪೂಜಿಸಬೇಕು.
ಮಧು ಕೈಟಭ
ಪುರಾಣಗಳ ಪ್ರಕಾರ, ಈತ ರಾಕ್ಷಸನಾಗಿದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಮನುಷ್ಯನಲ್ಲಿಯೂ ಇರುವ ಪ್ರಧಾನವಾದ ಎರಡು ದುರ್ಗುಣಗಳು ಎನ್ನಬಹುದು. ಮಧು ಎಂದರೆ ಜೇನು, ಅದಕ್ಕಿರುವ ಗುಣ ಅಂಟು. ನಾವು ಪ್ರಪಂಚದ ಎಲ್ಲ ವಿಷಯ ಭೋಗಗಳಿಗೆ ಅಂಟಿಕೊಂಡಿರುತ್ತೇವೆ. ಕೈಟಭ ಎಂದರೆ ಕೀಟ. ಸೃಷ್ಟಿಯ ನಾಶ ಮಾಡುತ್ತಾ ಇರುತ್ತೇವೆ.;) ಇವುಗಳನ್ನು ಅರಿತು ಎಚ್ಚರಗೊಳ್ಳಲು ಆಗದೆ ನಿದ್ರಾವಸ್ಥೆಯಲ್ಲಿರುವ ನಾವು ಆ ತಾಯಿಯನ್ನು ಶೈಲಪುತ್ರಿ ಸ್ವರೂಪದಿಂದ ಧ್ಯಾನಿಸಿ,ಪೂಜಿಸಿ ಮಾಯೆಯಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕು.
ಪೂಜಾ ವಿಧಾನ
ಸ್ನಾನಾದಿ ನಿತ್ಯ ಶುದ್ಧಿ ನಂತರ ಮನೆಯ ಈಶಾನ್ಯದಲ್ಲಿ ಅಥವಾ ದೇವರ ಮನೆಯಲ್ಲಿ ರಂಗೋಲಿಯಲ್ಲಿ ಅಷ್ಟದಳ ಬರೆದು, ಅದರ ಮೇಲೆ ಕಲಶ ಸ್ಥಾಪನೆ ಮಾಡಿ, ಆ ಕಲಶದಲ್ಲಿ ಗಂಧ ಸಹಿತ ಶುದ್ಧ ನೀರನ್ನು ತುಂಬಿಸಿ, ನವರಾತ್ರಿಯ ಒಂದೊಂದು ದಿನವೂ ಒಂದೊಂದು ದೇವಿ ಸ್ವರೂಪವನ್ನು ಆರಾಧನೆ ಮಾಡಬೇಕು.