ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಡಬಲ್ ಮರ್ಡರ್ ಮಾಡಿರುವ ಆರೋಪಿಯನ್ನು ಈ ಹಿಂದೆ ಪ್ರಕರಣವೊಂದರಲ್ಲಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಜೈಲಿಂದ ಬಿಡಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ದುನಿಯಾ ವಿಜಿ ಅವರ ಆಶಯವನ್ನು ಕೊಲೆ ಪಾತಕಿ ವ್ಯರ್ಥ ಮಾಡಿದ್ದಾನೆ ಎನ್ನಲಾಗಿದೆ.
ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್‌ಗೆ ಈ ಹಿಂದೆ ಪ್ರಕರಣವೊಂದರಲ್ಲಿ ಶ್ಯೂರಿಟಿ ಹಣ ನೀಡಿ ದುನಿಯಾ ವಿಜಯ್ ಬಿಡಿಸಿದ್ದರು. ಈ ಹಿಂದೆ ಡಬಲ್ ಮರ್ಡರ್ ಕೇಸ್ ಹಾಗೂ ರೇಪ್ ಕೇಸಲ್ಲಿ ಆರೋಪಿ ಸುರೇಶ್ ಜೈಲು ಸೇರಿದ್ದ.
10 ವರ್ಷ ಶಿಕ್ಷೆ ಅನುಭವಿಸಿದ್ದ ಅಪರಾಧಿಗೆ ಶ್ಯೂರಿಟಿ ಹಣ ನೀಡಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಶ್ಯೂರಿಟಿ ಹಣವನ್ನು ನಟ ವಿಜಯ್ ಕಟ್ಟಿದ್ದರು. ಈ ವೇಳೆ ಸುರೇಶ್‌ಗೂ ಕೂಡ ಮೂರು ಲಕ್ಷ ಶ್ಯೂರಿಟಿ ಹಣ ನೀಡಿ ಜೈಲಿಂದ ಬಿಡುಗಡೆಗೊಳಿಸಿದ್ದರು.
ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್‌ನಲ್ಲಿ ಕೊತ್ತಮಿರಿ ಸೊಪ್ಪು ಮಾರಾಟ ಮಾಡಿ ಸುರೇಶ್ ಜೀವನ ಸಾಗಿಸುತ್ತಿದ್ದ. ಸುರೇಶ್ ಸಂಬಂಧಿಯಿಂದ ಶೆಡ್‌ನಲ್ಲಿ ಕೆಲಸ ಪಡೆದುಕೊಂಡಿದ್ದ. ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಅಂತಾ ಹೀಯಾಳಿಸಿದ್ದರು. ಹೀಗಾಗಿ, ಈಚೆಗೆ ಇಬ್ಬರನ್ನೂ ಆರೋಪಿ ಸುರೇಶ್ ಕೊಲೆ ಮಾಡಿದ್ದ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.