ಮ್ಯಾಡ್ರಿಡ್: ದಶಕಗಳಲ್ಲೇ ಕಂಡೂಕೇಳರಿಯದ ಪ್ರವಾಹಕ್ಕೆ ಸ್ಪೇನ್ ಅಕ್ಷರಶಃ ತತ್ತರಿಸಿದೆ. ಅದರಲ್ಲೂ ಪೂರ್ವ ಸ್ಪೇನ್‌ನ ವಾಲೆನ್ಸಿಯಾದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈವರೆಗೆ ಮೃತರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರವಾಹದಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ.
1973ರ ಪ್ರವಾಹದಲ್ಲಿ 150ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದರು. ಆ ನಂತರ ಇದು ಅತಿದೊಡ್ಡ ಪ್ರವಾಹ ಎಂದು ಹೇಳಲಾಗುತ್ತಿದೆ. ಅತಿ ಹೆಚ್ಚು ಹಾನಿಗೊಳಗಾದ ಪೂರ್ವ ವೇಲೆನ್ಸಿಯಾ ಪ್ರದೇಶದಲ್ಲಿ 202 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ನೆರೆಯ ಕ್ಯಾಸ್ಟಿಲ್ಲಾ-ಲಾ ಮಂಚಾ ಮತ್ತು ದಕ್ಷಿಣದ ಆಂಡಲೂಸಿಯಾದಲ್ಲಿ ಮೂರು ಸಾವುಗಳು ಸಂಭವಿಸಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಈವರೆಗೆ 4,500 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಸ್ಪೇನ್‌ನ ಒಳಾಡಳಿತ ಸಚಿವ ಫರ್ನಾಂಡೋ ಗ್ರಾಂಡೆ-ಮರ್ಲಾಸ್ಕಾ ಹೇಳಿದ್ದಾರೆ.
ರಸ್ತೆಗಳ ಮೇಲೆ ಕಾರುಗಳು ಎಲ್ಲೆಂದರಲ್ಲಿ ಬಿದ್ದಿವೆ. ರಕ್ಷಣಾ ಕಾರ್ಯಕ್ಕೆ ಹವಾಮಾನವೂ ಅನುಕೂಲ ಮಾಡಿಕೊಡ್ತಿಲ್ಲ. ಇನ್ನು ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಹೆಲಿಕಾಪ್ಟರ್, ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳ ಅಡಿ ಬದುಕುಳಿದವರಿಗೆ ಶೋಧ ನಡೆಸಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆಗಳಿಗೆ ಈಗಾಗಲೇ ವಿವಿಧ ಭದ್ರತಾ ಪಡೆಗಳ 1,200 ಸಿಬ್ಬಂದಿಯನ್ನು ನೇಮಿಸಿದೆ. ಇನ್ನೂ 500 ಹೆಚ್ಚುವರಿ ಸಿಬ್ಬಂದಿಯನ್ನ ಪ್ರವಾಹಪೀಡಿತ ಪ್ರದೇಶಗಳಿಗೆ ನಿಯೋಜಿಸಲು ಸ್ಥಳೀಯ ಸರ್ಕಾರ ಮುಂದಾಗಿದೆ ಎಂದು ವರದಿಗಳು ಹೇಳಿವೆ.