ಕೊಪ್ಪಳ: ಹಿಂಗಾರು ಮಳೆಯಿಂದಾಗಿ ಜಿಲ್ಲೆಯ ಮುನಿರಾಬಾದ್ ಬಳಿಯಿರುವ ತುಂಗಾಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಜಲಾಶಯಕ್ಕೆ 84,000 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ 78,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಒಳಹರಿವು ಹೆಚ್ಚಾದರೆ ಹೊರಹರಿವನ್ನು ಹೆಚ್ಚಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. ಆ.10 ರಂದು ಜಲಾಶಯದ 19 ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಸಂಪೂರ್ಣ ಜಲಾಶಯ ಭರ್ತಿ ಮಾಡದೇ ಇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಸ್ತುತ ಜಲಾಶಯದಲ್ಲಿ 101.656 ಟಿಎಂಸಿ ನೀರು ಸಂಗ್ರಹವಾಗಿದೆ.
ಆ.10ರ ತಡರಾತ್ರಿ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ರ ಚೈನ್‍ಲಿಂಕ್ ತುಂಡಾಗಿತ್ತು. ಚೈನ್ ಲಿಂಕ್ ತುಂಡಾಗಿದ್ದ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಬಳಿಕ ತಂತ್ರಜ್ಞರ ತಂಡ ಡ್ಯಾಂಗೆ ಗೇಟ್ ಅಳವಡಿಸಿತ್ತು. ಇದೀಗ ಭಾರೀ ಮಳೆಯ ಪರಿಣಾಮ ಡ್ಯಾಂನಲ್ಲಿ ಮತ್ತೆ ನೀರು ಸಂಗ್ರಹವಾಗಿದೆ.