ಲಕ್ನೋ: ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 5 ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಅಲಿಘರ್‌ನ ಯಮುನಾ ಎಕ್ಸ್‌ಪ್ರೆಸ್ ವೇಯಲ್ಲಿ ನಡೆದಿದೆ.
ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹ ಹಾಗೂ ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಅಪಘಾತದಲ್ಲಿ 11 ತಿಂಗಳ ಹೆಣ್ಣು ಮಗು, ಐದು ವರ್ಷದ ಮಗು, ಮೂವರು ಮಹಿಳೆಯರು ಮತ್ತು ಒಂಬತ್ತು ಪುರುಷರು ಸೇರಿದಂತೆ 15 ಮಂದಿ ಗಾಯಗೊಂಡಿದ್ದಾರೆ.
ಸ್ಥಳೀಯರು ಬಸ್ಸಿನ ಗಾಜುಗಳನ್ನು ಒಡೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೇವರ್‌ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರ ಪೈಕಿ ಮೂರು ಶವಗಳ ಗುರುತು ಪತ್ತೆ ಹಚ್ಚಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ.
ಬಸ್ ಫೈಜಾಬಾದ್ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.