ದೇಶ ಕಂಡ ಧೀಮಂತ ನಾಯಕ ರತನ್ ಟಾಟಾ ಅವರು ಇಡೀ ದೇಶವನ್ನೇ ಶೋಕದಲ್ಲಿ ಮುಳುಗಿಸಿ ಚಿರನಿದ್ರೆಗೆ ಜಾರಿದ್ದಾರೆ. ಜಾತಿ ಧರ್ಮ, ಭಾಷೆಗಳ ಗಡಿ ಮೀರಿ ಜನ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮ್ಮೆಲ್ಲಾ ಕರ್ತವ್ಯಗಳ ಮುಗಿಸಿ ಶಾಂತವಾಗಿ ಮಲಗಿರುವ ರತನ್ ಟಾಟಾ ಅವರು ಮಾಡಿದ ಮಾನವೀಯ ಕಾರ್ಯಗಳು ಅವರ ದೂರದೃಷ್ಟಿ ಒಂದೆರಡಲ್ಲ, ಮಾಡಿದ ಎಲ್ಲಾ ಕೆಲಸಗಳನ್ನು ಸಮಾಜದ ದೇಶದ ಸಾಮಾನ್ಯ ಜನರನ್ನೇ ಗುರಿಯಾಗಿಸಿಕೊಂಡು ಮಾಡಿದ ಕೆಲಸವಾಗಿದೆ. ಅತೀ ಶ್ರೀಮಂತಿಕೆಯಲ್ಲಿ ಜನಿಸಿದ್ದರೂ ಅವರ ಚಿಂತನೆಗಳೆಲ್ಲವೂ ಸಮಾಜದ ತಳ ಮಟ್ಟದ ಜೀವನ ಮಟ್ಟ ಸುಧಾರಿಸುವ ಯೋಜನೆಗಳ ರೂಪಿಸುವುದೇ ಆಗಿದ್ದವು. ಇಂತಹ ರತನ್ ಟಾಟಾ ಅವರು ಬೆಂಗಳೂರಿನಲ್ಲಿ ನಡೆದ ಒಂದು ಘಟನೆಯ ಬಗ್ಗೆ ನೆನಪು ಮಾಡಿಕೊಂಡಿದ್ದರು. ಆ ಘಟನೆಯೇ ಅವರು ನ್ಯಾನೋ ಕಾರ್ ಆರಂಭಿಸುವುದಕ್ಕೆ ಸ್ಪೂರ್ತಿಯಾಗಿತ್ತು, ಇದೇ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅವರ ಮಾತುಗಳು ಈಗ ವೈರಲ್ ಆಗುತ್ತಿವೆ. ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವ ಬಗ್ಗೆ ಅವರಿಗಿದ್ದ ದೂರದೃಷ್ಟಿಗೆ ಪ್ರತಿಯೊಬ್ಬರು ಭೇಷ್ ಅನ್ನುತ್ತಿದ್ದಾರೆ. ಜೊತೆಗೆ ಅಗಲಿದ ಮಹಾನ್ ಚೇತನಕ್ಕೆ ಅಶ್ರುತರ್ಪಣ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ರತನ್ ಟಾಟಾ ಅವರು ಪ್ರಯಾಣಿಸುತ್ತಿದ್ದ ವೇಳೆ ಒಂದು ಸ್ಕೂಟರ್ ಒಂದು ಅವರ ಕಾರಿನ ಮುಂದೆಯೇ ಸ್ಲಿಪ್ ಆಗಿ ಬಿದ್ದಿತ್ತು. ಈ ವೇಳೆ ನಮ್ಮ ಕಾರು ಚಾಲಕ ಕಾರು ನಿಲ್ಲಿಸಿದ ಆದರೆ ಸ್ಕೂಟರ್ ಸ್ಲಿಪ್ ಆದ ಪರಿಣಾಮ ಸ್ಕೂಟರ್‌ನಲ್ಲಿದ್ದವರೆಲ್ಲರೂ ರಸ್ತೆಗೆ ಬಿದ್ದಿದ್ದರು. ಈ ವೇಳೆ ನನಗೆ ನಾವು ಇದಕ್ಕೆನಾದರು ಮಾಡಬೇಕು ಎಂಬ ಯೋಚನೆ ಬಂತು. ನಂತರ ಹಾಗೆಯೇ ಸ್ಕೂಟರಲ್ಲಿ ಸಂಚರಿಸುವವರು ಅಪಘಾತವಾದರೆ ಅಥವಾ ಕೆಳಗೆ ಬಿದ್ದರೆ ಸುರಕ್ಷಿತವಾಗಿರಲು ಸಾಧ್ಯವೇ ಎಂಬ ಬಗ್ಗೆ ಹಲವು ತಿಂಗಳುಗಳು ಪ್ರಯೋಗದಲ್ಲಿ ಕಳೆಯಿತು. ಈ ಪ್ರಕ್ರಿಯೆಯಲ್ಲಿ ನಮಗೆ ಸ್ಕೂಟರ್ ರೈಡರ್‌ಗಳನ್ನು ಸುರಕ್ಷಿತವಾಗಿಸಲು ಸಾಧ್ಯವಿಲ್ಲ ಎಂದು ತಿಳಿಯಿತು.
ಇದೇ ವೇಳೆ ನಾವು ಏಕೆ ಜನರಿಗೆ ಕೈಗೆಟುಕುವ ದರದ ಕಾರನ್ನು ತಯಾರಿಸಬಾರದು ಎಂಬ ಯೋಚನೆ ಬಂತು. ಅತ್ಯಂತ ದುಬಾರಿ ಕಾರು, ಅತ್ಯಂತ ಕಡಿಮೆ ಬೆಲೆಯ ಕಾರು ಹಾಗೂ ಮೋಟರ್ ಬೈಕ್‌ಗಳ ಮಧ್ಯೆ ಏಕೆ ನಾಲ್ಕರಿಂದ ಐದು ಜನ ಪ್ರಯಾಣಿಸುವ ಕುಟುಂಬಕ್ಕೆ ಕೈಗೆಟುಕುವ ಕಾರನ್ನು ನಿರ್ಮಿಸಬಾರದು ಎಂಬ ಯೋಚನೆ ಬಂತು. ಎಲ್ಲಾ ಸ್ಥಿತಿಯಲ್ಲೂ ಕುಟುಂಬವೊಂದು ಪ್ರಯಾಣಿಸುವ ಮೋಟಾರ್ ಬೈಕ್ ಅಲ್ಲ ಕಾರು ಸಾಮಾನ್ಯ ಜನರನ್ನು ತಲುಪಬೇಕು ಎಂಬ ಯೋಚನೆ ಬಂತು ಎಂದು ಟಾಟಾ ಹೇಳಿಕೊಂಡಿದ್ದರು. ಅದರ ಪರಿಣಾಮವೇ ಟಾಟಾ ನ್ಯಾನೋ ಕಾರಿನ ಬಿಡುಗಡೆ.
ಆದರೆ ಟಾಟಾ ಅವರ ಕನಸಿನಂತೆ ಅದು ಭಾರತದಲ್ಲಿ ಅಷ್ಟೊಂದು ಜನಪ್ರಿಯವಾಗಲಿಲ್ಲ, ಬಡವರಿಗೆ ಸಹಾಯವಾಗಲಿ ಎಂದು ಹೊರ ತಂದ ಈ ಕಾರು ಟಾಟಾ ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡಿತ್ತು. ಟಾಟಾ ಕಾರು ಮಾರುಕಟ್ಟೆಗೆ ಬಂದ ಆರಂಭದಲ್ಲಿ ಕೆಲವೆಡೆ ಬೆಂಕಿಗೆ ಆಹುತಿಯಾಗಿತ್ತು. ಇದು ಟಾಟಾ ಅವರ ಕನಸಿಗೆ ಬೆಂಕಿ ಹಚ್ಚಿತ್ತು. ಕಾರಿನ ಬಗ್ಗೆ ಎಲ್ಲೆಡೆ ಅಪಪ್ರಚಾರವಾಯ್ತು. ಪರಿಣಾಮ ಟಾಟಾ ಅವರಿಗೆ ಭಾರಿ ನಷ್ಟವೂ ಆಗಿತ್ತು.