ಛತ್ತೀಸ್‌ಗಢ: ಮಾವೋವಾದಿಗಳು ಅಳವಡಿಸಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡ ಪರಿಣಾಮ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್‌ನ ಇಬ್ಬರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನದ ಸುಮಾರಿಗೆ, ಐಟಿಬಿಪಿ, ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ ತಂಡಗಳು ಧುರ್ಬೇಡದಲ್ಲಿ ಕಾರ್ಯಾಚರಣೆ ನಡೆಸಿ ನಾರಾಯಣಪುರಕ್ಕೆ ಹಿಂತಿರುಗುತ್ತಿದ್ದಾಗ ಅಬುಜ್‌ಮಾದ್ ಪ್ರದೇಶದ ಕೊಡ್ಲಿಯಾರ್ ಗ್ರಾಮದ ಬಳಿ ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟಗೊಂಡಿದೆ.
ಐಇಡಿ ಸ್ಫೋಟಗೊಂಡ ಪರಿಣಾಮ ಮಹಾರಾಷ್ಟ್ರದ ಸತಾರಾ ಮೂಲದ ಅಮರ್ ಪನ್ವಾರ್ ಮತ್ತು ಆಂಧ್ರಪ್ರದೇಶದ ಕಡಪಾ ಮೂಲದ ಕೆ ರಾಜೇಶ್ ಎಂಬ ಇಬ್ಬರು ಐಟಿಬಿಪಿ ಯೋಧರು ಮೃತಪಟ್ಟಿದ್ದಾರೆ. ಪನ್ವಾರ್ ಮತ್ತು ರಾಜೇಶ್ ಇಬ್ಬರೂ 36 ವರ್ಷ ವಯಸ್ಸಿನವರಾಗಿದ್ದು, ಐಟಿಬಿಪಿಯ 53ನೇ ಬೆಟಾಲಿಯನ್‌ನ ಭಾಗವಾಗಿದ್ದರು.
ಘಟನೆಯಲ್ಲಿ ಗಂಭೀರ ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.