ನವದೆಹಲಿ: ಚೀನಾದ ನಿರ್ದೇಶನದ ಮೇರೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆಯ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯ ಮೇಲೆ ಇತ್ತೀಚೆಗೆ ರೈಲ್ವೇ ಸಂಚಾರದ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ಭಾಗಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಸೇತುವೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನಿ ಮತ್ತು ಚೀನಾದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿವೆ ಎಂದು ಮೂಲಗಳು ತಿಳಿಸಿವೆ.
ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಇದನ್ನು ಪೂರ್ಣಗೊಳಿಸಲು ಸುಮಾರು 20 ವರ್ಷಗಳು ಬೇಕಾಯಿತು. ಇದು ಜಮ್ಮುವಿನ ಮೂಲಕ ಹಾದುಹೋಗುವ 272 ಕಿಲೋಮೀಟರ್ ಆಲ್-ವೆದರ್ ರೈಲ್ವೆ ವಿಭಾಗದ ವ್ಯಾಪ್ತಿಗೆ ಬರಲಿದೆ.
ಚೆನಾಬ್ ಸೇತುವೆ ವಿಶ್ವದ ಅತಿ ಎತ್ತರದ ರೈಲು ಸೇತುವೆಯಾಗಿದೆ. ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿರುವ ಇದು ನದಿಪಾತ್ರದ ಮೇಲೆ 359 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಸುಮಾರು 1.3 ಕಿಮೀ ಉದ್ದದ ರೈಲು ಸೇತುವೆ ಇದಾಗಿದೆ.
ಈ ವರ್ಷ ಜೂನ್‌ನಲ್ಲಿ ಚೆನಾಬ್ ಸೇತುವೆ ಮೇಲೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು.