ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್‌, ಟ್ಯಾಬ್‌ FSLಗೆ ಕಳಿಸಲು ತಯಾರಿ

public wpadmin

ಬೆಂಗಳೂರು: ಮಠ ಖ್ಯಾತಿಯ ಸ್ಯಾಂಡಲ್‌ವುಡ್ ನಿರ್ದೇಶಕ, ನಟ ಗುರುಪ್ರಸಾದ್ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ. ಆದ್ರೆ ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢವಾಗಿಯೇ ಇದೆ.

ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಲಾಟ್‌ನಲ್ಲಿ ಪೊಲೀಸರು ತಡಕಾಡಿದ್ರೂ ಡೆತ್‌ನೋಟ್‌ ಸಿಕ್ಕಿಲ್ಲ. 4 ಮೊಬೈಲ್, ಎರಡು ಟ್ಯಾಬ್, ಒಂದು ಲ್ಯಾಪ್‌ಟಾಪ್ (Mobile, Laptop And Tab) ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಚಾರ್ಜ್‌ ಮಾಡದ ಹಿನ್ನೆಲೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಈ ಮೊಬೈಲ್‌, ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಲು ಪೊಲೀಸ್‌ ಅಧಿಕಾರಿಗಳು ತಯಾರಿ ಶುರು ಮಾಡಿದ್ದಾರೆ. ಒಂದು ವೇಳೆ ಸಾಯುವ ಮುನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣ ತಿಳಿಯಲಿದೆ. ಅಲ್ಲಿಯ ವರೆಗೂ ಸಾಲದ ಸುಳಿಗೆ ಸಿಲುಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಪತ್ನಿಯ ಹೇಳಿಕೆಯನ್ನೇ ಪರಿಗಣಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗುರುಪ್ರಸಾದ್ ಇತ್ತೀಚಿಗೆ ನಿರ್ದೇಶಿಸಿದ್ದ ರಂಗನಾಯಕ ಹೀನಾಯ ಸೋಲು ಕಂಡಿತ್ತು. ಇದರಿಂದ ಗುರುಪ್ರಸಾದ್ ಸಾಲದ ಸುಳಿಗೆ ಸಿಲುಕಿದ್ರು. ಅವರ ವಿರುದ್ಧ ಚೆಕ್‌ಬೌನ್ಸ್ ಕೇಸ್ ಕೂಡ ದಾಖಲಾಗಿತ್ತು. ಅಲ್ಲದೇ ಅವರ ಆರೋಗ್ಯ ಕೂಡ ಕೈಕೊಟ್ಟಿತ್ತು. ಇದ್ರ ನಡುವೆಯೂ ಗುರುಪ್ರಸಾದ್ 2ನೇ ಮದ್ವೆ ಮಾಡಿಕೊಂಡಿದ್ರು. ಈ ಎಲ್ಲವನ್ನೂ ಸಂಭಾಳಿಸಲಾಗದೇ ಖಿನ್ನತೆಗೆ ಒಳಗಾಗಿದ್ದ ಗುರುಪ್ರಸಾದ್, ಅಕ್ಟೋಬರ್ 28 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. 4-5 ದಿನಗಳ ಹಿಂದೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ವಿಷಯ ಗೊತ್ತಾಗಿದೆ. ಅಷ್ಟೊತ್ತಿಗೆ ಗುರುಪ್ರಸಾದ್ ಶವ ಕೊಳೆತು ಹೋಗಿತ್ತು. ತವರು ಮನೆಯಲ್ಲಿದ್ದ 2ನೇ ಪತ್ನಿಯನ್ನು ಕರೆಯಿಸಿದ ಪೊಲೀಸರು, ಅವರ ಸಮ್ಮುಖದಲ್ಲಿ ಮುಂದಿನ ಪ್ರಕ್ರಿಯೆ ಮುಗಿಸಿದ್ರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೀತು. ಕುಟುಂಬಸ್ಥರ ಸಮಕ್ಷಮದಲ್ಲಿ ಸಂಜೆಯೇ ವಿಲ್ಸನ್‌ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಗುರುಪ್ರಸಾದ್ ಅಂತ್ಯಕ್ರಿಯೆ ನಡೀತು. ನಟ ಧನಂಜಯ್, ದುನಿಯಾ ವಿಜಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದ್ರು.. ಗುರುಪ್ರಸಾದ್ 2ನೇ ಪತ್ನಿಯ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ. 2009 ರಲ್ಲಿ ಇದೇ ಜೋಡಿಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ ಡೈರೆಕ್ಟರ್ ಸ್ಪೇಷಲ್’,ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ ಮಠ’,ಎದ್ದೇಳು ಮಂಜುನಾಥ’,ಮೈಲಾರಿ’,ಹುಡುಗರು’,`ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article
Leave a comment