ವಾಷಿಂಗ್ಟನ್: ಕಳೆದ ವರ್ಷ ಭಾರತದಲ್ಲಿ 20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್ ಚಾಲನೆ ನೀಡುವ ಸಂದರ್ಭದಲ್ಲಿ ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕಟಗೊಂಡು ಶಾಕ್ ನೀಡಿತ್ತು. ಈಗ ಅಮೆರಿಕದಲ್ಲಿ ಅದಾನಿ ಗ್ರೀನ್ ಎನರ್ಜಿಗಾಗಿ 6,000 ಮಿಲಿಯನ್ ಅಮೆರಿಕನ್ ಡಾಲರ್ ಬಾಂಡ್ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿದ್ದ ಗೌತಮ್ ಅದಾನಿ ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆ ಶಾಕ್ ನೀಡಿದೆ.
ಗೌತಮ್ ಅದಾನಿ (Gautam Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಸೇರಿದಂತೆ ಇತರ ಏಳು ಅಧಿಕಾರಿಗಳು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್‌ಗೂ (ಅಂದಾಜು 2238 ಕೋಟಿ ರೂ.) ಹೆಚ್ಚು ಲಂಚದ (Bribe) ಭರವಸೆ ನೀಡಿದ್ದಾರೆ ಎಂದು ಆರೋಪಿಸಿದೆ.
ನ್ಯೂಯಾರ್ಕ್ ಕೋರ್ಟ್ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಬಂಧನ ವಾರೆಂಟ್ ಹೊರಡಿಸಿದೆ. ಆ ವಾರೆಟ್‌ಗಳನ್ನು ವಿದೇಶಿ ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ಯೋಜಿಸಿದ್ದಾರೆ ಎಂದು ವರದಿಯಾಗಿದೆ. ಗೌತಮ್ ಅದಾನಿ, ಸೈರಿಲ್ ಕೆಬನೆಸ್, ಸಾಗರ್ ಅದಾನಿ, ವಿನೀತ್ ಜೈನ್, ರಂಜಿತ್ ಗುಪ್ತ, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ, ರೂಪೇಶ್ ಅಗರ್ವಾಲ್ ಅವರ ವಿರುದ್ಧ ವಂಚನೆ ಪಿತೂರಿ ಆರೋಪ ಮಾಡಲಾಗಿದೆ.