ಕೆಆರ್‌ಎಸ್ ಡ್ಯಾಂನ ಹಳೆಯ ಕ್ರಸ್ಟ್‌ಗೇಟ್‌ ಮಾರಾಟ ಮಾಡಲು ಹುನ್ನಾರ

public wpadmin

ಮಂಡ್ಯ: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ 150 ಕ್ರಸ್ಟ್ ಗೇಟ್‌ಗಳನ್ನು ಬದಲು ಮಾಡಲಾಗಿದೆ. ಇದೀಗ ಈ ಹಳೆಯ ಗೇಟ್‌ಗಳನ್ನು ತೂಕದ ಲೆಕ್ಕದಲ್ಲಿ ಮಾರಾಟ ಮಾಡುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ.

ಈ 150 ಕ್ರಸ್ಟ್ ಗೇಟ್‌ಗಳ ಪೈಕಿ ಒಂದೊಂದು ಗೇಟ್‌ಗಳು ಸುಮಾರು 650 ಟನ್ ತೂಕ ಬರುತ್ತವೆ. ಇದೀಗ ಒಂದು ಕೆಜಿಗೆ 6 ರೂ.ನಂತೆ 36 ಗೇಟ್‌ಗಳನ್ನು 36 ಲಕ್ಷ ರೂ.ಗೆ ಮಾರಾಟ ಮಾಡುವ ಪ್ರಯತ್ನ ನಡೆದಿದೆ. ಆದ್ರೆ ಈ 36 ಗೇಟ್‌ಗಳ ಮೌಲ್ಯ ಸುಮಾರು 3 ಕೋಟಿ ರೂ.ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ 90 ವರ್ಷದ ಹಳೆಯ ಗೇಟ್‌ಗಳನ್ನು ಮಾರಿ ಕೋಟ್ಯಂತರ ರೂ.ಗಳನ್ನ ಗುಳಂ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಸ್ಥಳೀಯರು ಹಾಗೂ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

ಹಲವು ಕಡೆ ಮೊದಲು ಡ್ಯಾಂನ ಗೇಟ್‌ಗಳು ಸೋರಿಕೆಯಾಗುತ್ತಿದ್ದ ಕಾರಣ ಕಳೆದ ಬಿಜೆಪಿ‌ ಸರ್ಕಾರ ಸಂಪೂರ್ಣವಾಗಿ 150 ಕ್ರಸ್ಟ್‌ ಗೇಟ್‌ಗಳನ್ನು ಬದಲು ಮಾಡಲು ಮುಂದಾಗಿತ್ತು. ಸದ್ಯ ಹೀಗಾಗಲೇ ಈ ಕಾಮಗಾರಿ ಮುಕ್ತಾಯದ ಅಂಚಿನಲ್ಲಿ ಇದ್ದು, ಹಳೆ‌ಯ ಗೇಟ್‌ಗಳನ್ನು ಮಾರುವ ಹುನ್ನಾರ ಮಾಡಲಾಗುತ್ತಿದೆ.‌ ಇದಕ್ಕೆ ರೈತರು ಹಾಗೂ ಪ್ರಗತಿಪರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹಳೆಯ ಗೇಟ್‌ಗಳನ್ನು ಮಾರಾಟ ಮಾಡುವ ಬದಲು ಬೃಂದಾವನದ ವ್ಯಾಪ್ತಿಯಲ್ಲಿ ಒಂದು ಮ್ಯೂಸಿಯಂ ಮಾಡಬೇಕು. ಆ ಮ್ಯೂಸಿಯಂನಲ್ಲಿ ಕನ್ನಂಬಾಡಿ ಕಟ್ಟೆ ಕಟ್ಟಿದ ಬಗೆ ಹಾಗೂ ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ವಿವರಿಸಬೇಕು. ಜೊತೆಗೆ ಈ 150 ಕ್ರಸ್ಟ್‌ಗಳನ್ನು ಅಲ್ಲಿಟ್ಟು, ಇಷ್ಟೊಂದು ಬೃಹತ್ ಗೇಟ್‌ಗಳನ್ನು ಯಂತ್ರಗಳ ಸಹಾಯವಿಲ್ಲದೇ ಹೇಗೆ ನಿರ್ಮಾಣ ಮಾಡಿದರು ಎಂಬುದನ್ನು ಜನರಿಗೆ ತೋರಿಸಬೇಕು. ಒಂದು ವೇಳೆ ವಿರೋಧದ ನಡೆವೆಯೇ ಗೇಟ್‌ಗಳನ್ನು ಮಾರಾಟ ಮಾಡಲು ಮುಂದಾದರೆ ರೈತ ಸಂಘ ಹೋರಾಟ ಮಾಡುವುದಾಗಿ ರೈತ ಸಂಘದ ಕೆಂಪೂಗೌಡ ಎಚ್ಚರಿಕೆ ನೀಡಿದ್ದಾರೆ.

Share This Article
Leave a comment