ಸಾಮಾನ್ಯವಾಗಿ ನಮ್ಮ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಸುಂದರವಾಗಿ ಕಾಣಬೇಕು ಎಂದು ಎಲ್ಲ ಹುಡುಗಿಯರು ಆಸೆ ಹೊಂದಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದಾರೆ.
ಅದರಲ್ಲೂ 20-25 ನೇ ವಯಸ್ಸಿನಲ್ಲಿಯೇ ಕೂದಲು ಉದುರುವಿಕೆ ಸಮಸ್ಯೆಯಿಂದ ಸಾಕಷ್ಟು ಮಂದಿ ಬಳಲುತ್ತಿದ್ದಾರೆ. ಇದರಿಂದಾಗಿ ಮುಜುಗರಕ್ಕೊಳಗಾಗುವುದರೊಂದಿಗೆ ಅಂತಹವರಲ್ಲಿ ಆತ್ಮವಿಶ್ವಾಸ ಕಡಿಮೆ ಆಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಂದಿನ ಅನಾರೋಗ್ಯಕರ ಜೀವನಶೈಲಿ ಮತ್ತು ಅನಗತ್ಯ ಆಹಾರ ಆಗಿರಬಹುದು. ಕೆಲ ಮಂದಿಗೆ ಕೂದಲನ್ನು ಬಾಚಿದರೆ ಸಾಕು ಬಹಳಷ್ಟು ಕೂದಲು ಉದುರುತ್ತದೆ.
ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ದೆಹಲಿ ಮೂಲದ ಚರ್ಮರೋಗ ತಜ್ಞೆ ನೇಹಾ ಖುರಾನಾ ಒಂದಷ್ಟು ಟಿಪ್ಸ್ ನೀಡಿದ್ದಾರೆ. ಇವರು ಹೇಳುವ ಪ್ರಕಾರ, ಪಟಿಕ ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದು, ಇದರಲ್ಲಿ ಹಲವು ಔಷಧೀಯ ಗುಣಗಳಿವೆ ಎಂದು ತಿಳಿಸಿದ್ದಾರೆ.
ನೀವು ಅತಿಯಾದ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಕೂದಲ ಬೆಳವಣಿಗೆ ನಿಂತಿದ್ದರೆ ಪಟಿಕ (Allum Stone) ಬೆರೆಸಿದ ನೀರಿನಲ್ಲಿ ತಲೆಗೆ ಸ್ನಾನ ಮಾಡುವುದು ಉತ್ತಮ. ಏಕೆಂದರೆ ಇದು ಕೂದಲಿಗೆ ಪೋಷಕಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಬಳಸುವ ಮತ್ತೊಂದು ವಿಧಾನವೆಂದರೆ ಗುಲಾಬಿ ಪಟಿಕ ಪುಡಿಯನ್ನು ಮೊದಲು ಹರಳೆಣ್ಣೆಯಲ್ಲಿ ಬೆರೆಸಿ, ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, 20 ನಿಮಿಷಗಳ ಕಾಲ ಬಿಡಿ. ಈಗ ಶುದ್ಧ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿಯಾದರೂ ಮಾಡಿದರೆ ಸಾಕು, ನಿಮ್ಮ ಕೂದಲು ಉದುರಿವಿಕೆ ಸಮಸ್ಯೆ ದೂರವಾಗುತ್ತದೆ ಎಂದೇ ಹೇಳಬಹುದು.
ಕೂದಲು ಉದುರುವಿಕೆಗೆ ಇತರ ಪರಿಹಾರಗಳು: ಮಸಾಜ್: ಕೂದಲು ಉದುರುವಿಕೆಗೆ ಒತ್ತಡ ಪ್ರಮುಖ ಕಾರಣವಾಗಿದೆ. ಆದ್ದರಿಂದ ನಿಯಮಿತವಾಗಿ ನಿಮ್ಮ ತಲೆಯನ್ನು ಎಣ್ಣೆಯಿಂದ ಮಸಾಜ್ ಮಾಡುವುದು ಮುಖ್ಯ. ಹೀಗೆ ಮಾಡುವುದರಿಂದ ಒತ್ತಡ ದೂರವಾಗುತ್ತದೆ ಮತ್ತು ರಕ್ತ ಸಂಚಾರವೂ ಸುಧಾರಿಸುತ್ತದೆ. ಈರುಳ್ಳಿ ರಸ: ಈರುಳ್ಳಿಯಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತ ನಿವಾರಕ ಅಂಶಗಳು ಕಂಡುಬರುತ್ತವೆ. ಇದು ಕೂದಲಿನ ಬಲವನ್ನು ಹೆಚ್ಚಿಸುವುದಲ್ಲದೇ, ನೆತ್ತಿಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕೂದಲಿನ ಬೇರುಗಳ ಮೇಲೆ ಈರುಳ್ಳಿ ರಸವನ್ನು ಅನ್ವಯಿಸುವುದರಿಂದ, ನೆತ್ತಿಯು ಪ್ರೋಟೀನ್ ಕೆರಾಟಿನ್ ಅನ್ನು ಪಡೆಯುತ್ತದೆ, ಇದು ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ಮೆಂತ್ಯ: ಮೆಂತ್ಯವು ಪ್ರೋಟೀನ್, ಕಬ್ಬಿಣ ಮತ್ತು ನಿಕೋಟಿನಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದಲ್ಲದೇ, ಮೆಂತ್ಯದ ನೈಸರ್ಗಿಕ ಎಣ್ಣೆಯು ಕೂದಲಿಗೆ ಹೊಳಪನ್ನು ತರುತ್ತದೆ ಮತ್ತು ಅದನ್ನು ಒಡೆಯದಂತೆ ರಕ್ಷಿಸುತ್ತದೆ. ಗ್ರೀನ್ ಟೀ ದೇಹದ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ, ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಟೀ ಬ್ಯಾಗ್ ಗಳನ್ನು ಹೇರ್ ಮಾಸ್ಕ್ ಆಗಿ ಉಪಯೋಗಿಸಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಬಹುದು.