ಕಲಬುರಗಿ: ತಾಲೂಕಿನ ಹಸನಾಪುರ ಬಳಿ ಭೀಕರ ಸರಣಿ ಅಪಘಾತಕ್ಕೆ ನಾಲ್ವರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಬೈಕ್, ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿತು. ಬೈಕ್ ಮತ್ತು ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ. ರಾಘವೇಂದ್ರ (35), ಮುಜಾಹಿದ್ (30), ಹುಸೇನ್ ಬಿ (45) ಮೌಲಾಬಿ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್‌ನಲ್ಲಿದ್ದ ಪರಮಾನಂದ ಹಾಗೂ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಂಧಗಿಯಿಂದ ಚಿತ್ತಾಪುರದ ಕಡೆಗೆ ಹೊರಟಿದ್ದ ಬೈಕ್ ಲಾರಿಗೆ ಡಿಕ್ಕಿ ಹೊಡೆಯಿತು. ಲಾರಿಗೆ ಡಿಕ್ಕಿ ಹೊಡೆದು ಲಾರಿ ಚಕ್ರಕ್ಕೆ ಬೈಕ್ ಸಿಲುಕಿತು. ಈ ವೇಳೆ ವೇಗವಾಗಿ ಬಂದ ಕಾರು, ಲಾರಿಗೆ ಡಿಕ್ಕಿ ಹೊಡೆದ ಹಿನ್ನಲೆ ಕಾರಿನಲ್ಲಿದ್ದ ಮೂವರು ದುರ್ಮರಣಕ್ಕೀಡಾಗಿದ್ದಾರೆ.
ಮೃತರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ಕಾರಲ್ಲಿ ತೇರಳುತ್ತಿದ್ದರು. ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಡಾ ಶರಣಬಸಪ್ಪ ಡಘೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಟ್ರಾಫಿಕ್ 1 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.