ಬೆಂಗಳೂರು: ಪರಿಶಿಷ್ಟ ವರ್ಗದ ಎಲ್ಲರೂ ಸಮಾನವಾಗಿ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಒಳಮೀಸಲಾತಿ ಜಾರಿಗೆ ಒಪ್ಪಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಸ್ಪಷ್ಟಪಡಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ನಾನು ಒಳಮೀಸಲಾತಿಗೆ ವಿರುದ್ಧವಾಗಿದ್ದಾರೆ, ಸಹಕರಿಸುತ್ತಿಲ್ಲ ಎಂದು ಕೆಲ ಕಿಡಿಗೇಡಿಗಳು ಆರೋಪಿಸುತ್ತಿದ್ದಾರೆ. ಅನವಶ್ಯಕವಾಗಿ ನಮ್ಮ ಹೆಸರುಗಳನ್ನು ತರುವುದು ಸರಿಯಲ್ಲ. ಒಳಮೀಸಲಾತಿ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನೇರವಾಗಿ ಚರ್ಚಿಸಿದ್ದೇನೆ. ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕರೊಂದಿಗೆ ಮಾತನಾಡಿದ್ದೇನೆ. ಒಳಮೀಸಲಾತಿ ಜಾರಿಗೆ ವಿರುದ್ಧವಾಗಿದ್ದೇವೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಇನ್ನು ಮುಂದಾದರೂ ಈ ರೀತಿಯಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ನಾನು ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದರಿಂದ ಕ್ಯಾಬಿನೆಟ್‌ಗೆ ಹಾಜರಾಗಲು ಆಗಲಿಲ್ಲ. ಒಳಮೀಸಲಾತಿಗೆ ಸಮಿತಿ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಮೂರು ತಿಂಗಳ ಗಡುವು ನೀಡಿರುವುದು ಮಹತ್ವವಾದದ್ದು. ಒಳಮೀಸಲಾತಿಗೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಒಳಮೀಸಲಾತಿ ಮಾಡಿರುವುದು ಸರಿಯಿಲ್ಲ ಎಂದು ಬಿಜೆಪಿಯವರು ಆರೋಪಿಸಲಿ ಸಂತೋಷ. ಆದರೆ, ಯಾರೋ ಕೆಲವರು, ನಾವು ಒಳಮೀಸಲಾತಿ ವಿರುದ್ಧ ಇದ್ದೇವೆ ಎಂದು ಹೇಳುವುದು ಸರಿಯಲ್ಲ. ಪರಿಶಿಷ್ಟ ವರ್ಗಗಳ ಜಾತಿಗಳ ಬಗ್ಗೆ ಸ್ಪಷ್ಟವಾದ ಅಂಕಿ-ಅಂಶ ಇಲ್ಲ. ಜಾತಿಗಣತಿಯಲ್ಲಿ ಆ ರೀತಿಯ ಅಂಕಿ-ಅಂಶ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಡೇಟಾ ಇದ್ದರೆ ಉಪಯೋಗಕ್ಕೆ ಬರುತ್ತದೆ. ಸಮಿತಿಯವರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ವಕ್ಫ್ ಬೋರ್ಡ್‌ನವರು ಜಿಲ್ಲಾಧಿಕಾರಿಗಳ ಮುಖಾಂತರ ನೋಟಿಸ್ ಕೊಡಿಸಿದ್ದಾರೆ. ನೋಟಿಸ್ ವಾಪಸ್ ಪಡೆಯಿರಿ, ಈ ಬಗ್ಗೆ ಪರಿಶೀಲಿಸೋಣ ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ವಿಷಯ ಇಲ್ಲಿಗೆ ಮುಗಿದಿದೆ. ಪರಿಶೀಲನೆ ಮಾಡುವರೆಗೂ ಯಾವುದೇ ರೈತರಿಗೂ ನೋಟಿಸ್ ನೀಡುವುದು ಬೇಡ ಎಂದು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರಕ್ಕೆ ಬಿಜೆಪಿಯವರು ಇಲ್ಲದಿರುವ ಬಣ್ಣಕಟ್ಟಿ ದೊಡ್ಡ ವಿಷಯ ಮಾಡಲು ಹೊರಟಿದ್ದಾರೆ. ಆಡಳಿತಾತ್ಮಕವಾಗಿ ನೋಟಿಸ್ ಹೋಗಿದೆ. ಅದನ್ನು ವಾಪಸ್ ಪಡೆಯಲಾಗುವುದು. ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ. ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಸೇರಿದಂತೆ ಯಾವುದೇ ಸಮುದಾಯ ಸರ್ಕಾರದಿಂದ ಒಂದಷ್ಟು ಸಹಾಯ ಬಯಸುತ್ತದೆ. ಬಿಜೆಪಿಯವರಿಗೆ ಇದನ್ನು ಸಹಿಸಲು ಆಗುವುದಿಲ್ಲ. ಆ ಸಮುದಾಯಗಳು ಹಾಗೆಯೇ ಇರಬೇಕು. ಇವರು ಮಾತ್ರ ಚೆನ್ನಾಗಿರಬೇಕು ಎಂಬ ತತ್ವದವರು ಎಂದು ಕಿಡಿಕಾರಿದರು.