ಉಡುಪಿಯ ಕಬ್ಬಿನಾಲೆಯಲ್ಲಿ ಎನ್‌ಕೌಂಟರ್‌ – ನಕ್ಸಲ್‌ ನಾಯಕ ವಿಕ್ರಂ ಗೌಡ ಹತ್ಯೆ

public wpadmin

ಉಡುಪಿ: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಹೆಬ್ರಿ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ (Kabbinale Forest) ನಕ್ಸಲ್‌ ಕಾರ್ಯಕರ್ತ ವಿಕ್ರಂ ಗೌಡನನ್ನು (Vikram Gowda) ಎನ್‌ಕೌಂಟರ್‌ (Encounter) ಮಾಡಿ ಹತ್ಯೆ ಮಾಡಲಾಗಿದೆ.

ನಕ್ಸಲ್‌ ನಿಗ್ರಹ ದಳ (ANF) ಮತ್ತು ನಕ್ಸಲರ (Naxal) ಮಧ್ಯೆ ಮಂಗಳವಾರ ನಸುಕಿನ ಜಾವ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಓರ್ವ ಹತನಾಗಿದ್ದಾನೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ. ಎನ್‌ಕೌಂಟರ್‌ ಬಗ್ಗೆ ಎಎನ್‌ಎಫ್ ಅಧಿಕೃತ ಮಾಹಿತಿ ನೀಡಿಲ್ಲ.

ಕಳೆದ 15 ದಿನಗಳಿಂದ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಅರಣ್ಯ ಭಾಗದಲ್ಲಿ ಎಎನ್‌ಎಫ್‌ ಕೂಂಬಿಂಗ್ ನಡೆಸುತ್ತಿದೆ. ಸೋಮವಾರ ರಾತ್ರಿ ಐದು ಮಂದಿ ಇದ್ದ ನಕ್ಸಲರ ತಂಡ ಗ್ರಾಮಕ್ಕೆ ದಿನಸಿ ಸಾಮಗ್ರಿ ಖರೀದಿಗೆಂದು ಬಂದಿದ್ದಾಗ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿದೆ. ಅಷ್ಟರಲ್ಲಿ ನಕ್ಸಲರು ಎಎನ್‌ಎಫ್‌ ಮೇಲೆ ದಾಳಿ ನಡೆಸಿದ್ದಾರೆ. ದಾಳಿ-ಪ್ರತಿದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಉಳಿದವರು ಪರಾರಿಯಾಗಿದ್ದು ಶೋಧ ಕಾರ್ಯ ನಡೆಯುತ್ತಿದೆ.

ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದರು. ಕೊಪ್ಪ ತಾಲೂಕಿನ ಯಡಗುಂದ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ, ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಚರ್ಚಿಸಿದ್ದರು.

ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ (Kadaba) ಮನೆಗೆ ನಕ್ಸಲರು ಬಂದಿದ್ದ ಶಂಕೆ ವ್ಯಕ್ತವಾಗಿತ್ತು. ಕೊಂಬಾರು ಗ್ರಾಮದ ಚೆರು ಗ್ರಾಮದ ಮನೆಗೆ ತಡರಾತ್ರಿ ಬಂದ 6 ಮಂದಿ ಎರಡು ಗಂಟೆಗಳ ಕಾಲ ಇದ್ದು ಮನೆಯಲ್ಲಿ ಊಟ ಮಾಡಿ ದಿನಸಿ ಸಾಮಾಗ್ರಿಗಳನ್ನು ಪಡೆದ ಮಾಹಿತಿ ಲಭ್ಯವಾಗಿತ್ತು. ಈ ವಿಚಾರ ತಿಳಿದ ಬೆನ್ನಲ್ಲೇ ನಕ್ಸಲ್‌ ನಿಗ್ರಹ ದಳಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿತ್ತು.

Share This Article
Leave a comment