ಟೆಹ್ರಾನ್: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವರ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಪೋಸ್ಟ್‌ನಲ್ಲಿ ಇಸ್ರೇಲ್ ತಪ್ಪು ಮಾಡಿದೆ. ಇರಾನ್ ಮೇಲಿನ ಅದರ ಲೆಕ್ಕಾಚಾರ ತಪ್ಪಾಗಿದೆ. ಇರಾನ್ ರಾಷ್ಟ್ರವು ಯಾವ ರೀತಿಯ ಶಕ್ತಿ, ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಇಸ್ರೇಲ್‌ಗೆ ಅರ್ಥ ಮಾಡಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದರು.
ಶನಿವಾರ ಇರಾನ್‌ನಲ್ಲಿ ಸೇನಾ ನೆಲೆಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ನಂತರ ಖಮೇನಿ ಇಸ್ರೇಲ್‌ನಲ್ಲಿ ಮಾತನಾಡುವ ಹೀಬ್ರೂ ಭಾಷೆಯಲ್ಲಿ ಪೋಸ್ಟ್ ಮಾಡಲು ಖಾತೆಯನ್ನು ತೆರೆದಾಗ, ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ಎಕ್ಸ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ತೋರಿಸಿರುವುದಾಗಿ ವರದಿಯಾಗಿದೆ.