2019ರ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯಲಾಗಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಸದ್ಯ ಅಲ್ ಖೈದಾ ಭಯೋತ್ಪಾದಕ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಜೋರಾದ ಸಿದ್ಧತೆ ನಡೆಸಿದ್ದಾನೆ ಎನ್ನಲಾಗಿದೆ.
ಬ್ರಿಟನ್ ಮಾಧ್ಯಮಗಳು ಹೇಳುವ ಪ್ರಕಾರ ರಕ್ಷಣಾ ತಜ್ಞರು ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಇನ್ನೂ ಜೀವಂತವಾಗಿಯೇ ಇದ್ದಾನೆ. ರಹಸ್ಯವಾಗಿ ತನ್ನ ಭಯೋತ್ಪಾದನಾ ಸಂಘಟನೆಯನ್ನು ಮುನ್ನಡೆಸುತ್ತಿದ್ದಾನೆ, ಹಲವು ಮೂಲಗಳ ಪ್ರಕಾರ ಹಮ್ಜಾ ಬಿನ್ ಲಾಡೆನ್ ಸಹೋದರ ಅಬ್ದುಲ್ಲಾ ಕೂಡ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನಂತೆ.
ಈಗಾಗಲೇ ಭಯೋತ್ಪಾದನಾ ಸಂಘಟನೆಯಾಗಿರುವ ಅಲ್ಖೈದಾ ಮತ್ತೆ ಗುಂಪು ಕಟ್ಟಿಕೊಳ್ಳುತ್ತಿದ್ದು, ಮುಂದಿನ ದಾಳಿಯ ಬಗ್ಗೆ ದೊಡ್ಡ ಸ್ಕೆಚ್ ಹಾಕಿಕೊಳ್ಳುತ್ತಿದೆ ಎಂದು ಬ್ರಿಟನ್ನ ರಕ್ಷಣಾ ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಹಮ್ಜಾ ಬಿನ್ ಲಾಡೆನ್ ಅಲ್ ಖೈದಾ ನಾಯಕತ್ವವನ್ನು ವಹಿಸಿಕೊಂಡಿದ್ದು, ಇರಾಕ್ ಯುದ್ಧದ ಬಳಿಕ ಮತ್ತೆ ಅದನ್ನು ಪುನರುತ್ಥಾನದ ಕಡೆಗೆ ಒಯ್ಯುವ ಉದ್ದೇಶ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.