ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ ಗರ್ಭಗುಡಿ ಗುರುವಾರ ತೆರೆದಿದ್ದು, ಇಂದಿನಿಂದ (ಶುಕ್ರವಾರ) ಸಾರ್ವಜನಿಕರು ಶಕ್ತಿದೇವತೆಯ ದರ್ಶನ ಪಡೆಯಬಹುದಾಗಿದೆ.
ಇಂದಿನಿಂದ 10 ದಿನ ಹಾಸನಾಂಬೆ ದೇವಿ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಇಂದು ಮುಂಜಾನೆ 4 ಗಂಟೆಗೆ ದರ್ಶನ ಆರಂಭವಾಗಿದ್ದು, ಇಂದು ಶಕ್ತಿದೇವತೆಯ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬಂದಿದೆ. ಗುರುವಾರ ಮಧ್ಯರಾತ್ರಿಯಿಂದಲೇ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಒಂದು ವರ್ಷದ ಬಳಿಕ ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಪಡೆದು ಭಕ್ತರು ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ರಾತ್ರಿ 11 ಗಂಟೆಯವರೆಗೂ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ. ನವೆಂಬರ್ 3ಕ್ಕೆ ಹಾಸನಾಂಬ ಜಾತ್ರಾ ಮಹೋತ್ಸವ ಜರುಗಲಿದ್ದು, ಕೊನೆಯ ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಉಳಿದ ಒಂಭತ್ತು ದಿನ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.