ಲಕ್ನೋ: ಬಿಜೆಪಿ ಕಾರ್ಪೊರೇಟರ್ ಮಗ ಆನ್‌ಲೈನ್‌ನಲ್ಲಿ ಪಾಕಿಸ್ತಾನಿ ಹುಡುಗಿಯನ್ನು ವರಿಸಿದ ಘಟನೆ ಉತ್ತರ ಪ್ರದೇಶದ ಜೌನ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
‘ನಿಕಾಹ್’ ಮೂಲಕ ಪಾಕ್ ಯುವತಿಯೊಂದಿಗೆ ವಿವಾಹ ನೆರವೇರಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್‌ಗೆ ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ನಿಶ್ಚಯಿಸಿದ್ದರು. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವೀಸಾಗೆ ಅರ್ಜಿ ಸಲ್ಲಿಸಿದರೂ ವರನಿಗೆ ವೀಸಾ ಸಿಕ್ಕಿರಲಿಲ್ಲ.
ಈ ಬೆನ್ನಲ್ಲೇ ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅನಾರೋಗ್ಯಕ್ಕೆ ಒಳಗಾಗಿ ಪಾಕಿಸ್ತಾನದ ಐಸಿಯುಗೆ ದಾಖಲಾದರು. ಈ ಹಿನ್ನೆಲೆ ಮದುವೆ ಸಮಾರಂಭವನ್ನು ಆನ್‌ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದಾರೆ. ಲಾಹೋರ್‌ನ ವಧುವಿನ ಕುಟುಂಬದವರು ಹಾಗೂ ವರನ ಕುಟುಂಬಸ್ಥರು ‘ನಿಕಾಹ್’ ಸಮಾರಂಭದಲ್ಲಿ ಭಾಗವಹಿಸಿದ್ದರು.
ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಈ ಬಗ್ಗೆ ಪ್ರತಿಕ್ರಿಯಿಸಿ, ಇಸ್ಲಾಂನಲ್ಲಿ ‘ನಿಕಾಹ್’ಗೆ ಮಹಿಳೆಯ ಒಪ್ಪಿಗೆ ಅತ್ಯಗತ್ಯ. ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭವನ್ನು ನಡೆಸಿದಾಗ ಆನ್‌ಲೈನ್ ‘ನಿಕಾಹ್’ ಸಾಧ್ಯ ಎಂದು ತಿಳಿಸಿದ್ದಾರೆ.