ವಾಷಿಂಗ್ಟನ್: ಇಡೀ ವಿಶ್ವವೇ ಭಾರೀ ಕುತೂಹಲದಿಂದ ಕಾಯುತ್ತಿದ್ದ ಬಹುನಿರೀಕ್ಷಿತ 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತ ಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಬರೋಬ್ಬರಿ 270ಕ್ಕೂ ಮತಗಳು ಪಡೆಯುವ ಮೂಲಕ ಗೆದ್ದು ಬೀಗಿದ್ದಾರೆ. ಈ ಮೂಲಕ ಅಮೆರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಮತ ಎಣಿಕೆ ಬಿರುಸಿನಿಂದ ನಡೆದಿದ್ದು, ಆರಂಭಿಕ ಹಂತದಿಂದಲೇ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮುನ್ನಡೆ ಸಾಧಿಸಿದ್ರು. ಒಂದೆಡೆ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ರೆ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಭಾರೀ ಹಿನ್ನಡೆ ಆಗಿದೆ.
ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಇನ್ನೂ ಮುಂದಿನ 4 ವರ್ಷಗಳ ಕಾಲ ಅಮೆರಿಕಾ ಅಧ್ಯಕ್ಷರಾಗಲಿದ್ದಾರೆ. ಅಮೆರಿಕಾದ ಪ್ರತಿಷ್ಠಿತ ಶ್ವೇತಭವನದಲ್ಲಿ ಕೂತು ರೂಲ್ ಮಾಡಲಿದ್ದಾರೆ. ಅಮೆರಿಕಾದಲ್ಲಿ ಒಟ್ಟು 538 ಎಲೆಕ್ಟ್ರೋಲ್ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಇದರಲ್ಲಿ 270 ಸಂಖ್ಯೆ ತಲುಪಿದವರು ಗೆಲುವು ಸಾಧಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಟ್ರಂಪ್ 270ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುಂದಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವಿಂಗ್ ರಾಜ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಈ ರಾಜ್ಯಗಳಲ್ಲಿ ಡೆಮೋಕ್ರಾಟ್ ಮತ್ತು ರಿಪಬ್ಲಿಕನ್ ಎರಡಕ್ಕೂ ಅಪಾರವಾದ ಬೆಂಬಲ ಇದೆ. ಪೆನ್ಸಿಲ್ವೇನಿಯಾ 19, ಮಿಚಿಗನ್ (10), ಜಾರ್ಜಿಯಾ (16), ವಿಸ್ಕಾನ್ಸಿನ್ (10), ಉತ್ತರ ಕೆರೊಲಿನಾ (16), ನೆವಾಡಾ (6) ಮತ್ತು ಅರಿಜೋನಾ (11) ಮತ ಹೊಂದಿವೆ. ಅಮೆರಿಕಾ ಅಧ್ಯಕ್ಷರಾಗಲು ಒಟ್ಟು 270 ಎಲೆಕ್ಟ್ರೋಲ್ ಮತಗಳ ಅವಶ್ಯಕತೆ ಇದೆ.